ನೀರಿಲಿ
 	ರೋಡೆಂಷಿಂiÀi ಗಣದ ಕ್ರೆಸಿಟಿಡೀ ಕುಟುಂಬದ ಮೈಕ್ರೋಟಿನೀ ಉಪಕುಟುಂಬಕ್ಕೆ ಸೇರಿದ ಒಂದು ದಂಶಕ (ವಾಟರ್ ಪೋಲ್). ಆರ್ವಿಕೋಲ ಟೆರೆಸ್ಟ್ರಿಸ್ ಇದರ ಶಾಸ್ತ್ರೀಯ ನಾಮ. ಯೂರೋಪಿನ, ರಷ್ಯದ ಕೆಲವು ಭಾಗಗಳು, ಸೈಬೀರಿಯಾ, ಏಷ್ಯಾ ಮೈನರ್, ಸಿರಿಯಾ, ಇಸ್ರೇಲ್, ಇರಾನ್‍ಗಳಲ್ಲೂ ಉಂಟು. ನದಿ, ಝರಿ ಮುಂತಾದವುಗಳ ತೀರ ಪ್ರದೇಶಗಳಲ್ಲಿ  ಬಿಲ ಮಾಡಿಕೊಂಡು ವಾಸಿಸುವ ಇದು ಜಲವಾಸಕ್ಕೆ ತಕ್ಕಂತೆ ಮಾರ್ಪಾಟಾಗಿದೆ. ದಿನವಿಡೀ ಚಟುವಟಿಕೆಯಿಂದ ಈಜುತ್ತ, ಕೆಸರು ನೆಲದ  ಮೇಲೆ ಓಡಾಡುತ್ತಾ ಕಾಲ ಕಳೆಯುತ್ತದೆ.

ಆರ್ವಿಕೋಲ ದೊಡ್ಡ ಗಾತ್ರದ್ದು: ಇದರ ಉದ್ದ 150-200ಮಿ.ಮೀ. ದೇಹದ ಮೇಲೆಲ್ಲ ದಪ್ಪ ತುಪ್ಪುಳು ಉಂಟು. ಬಣ್ಣ ತಿಳಿಗಂದು ಇಲ್ಲವೇ ಕಗ್ಗಂದು. ಇದು ಸಸ್ಯಾಹಾರಿ. ಜೊಂಡು ಮತ್ತಿತರ ಜಲಸಸ್ಯಗಳೇ ಇದರ ಆಹಾರ. ಬಾಚೀಹಲ್ಲುಗಳು ಅಗಲವಾಗಿದ್ದು, ಸವೆದಂತೆಲ್ಲ ನಿರಂತರವಾಗಿ ಬೆಳೆಯುತ್ತಿರುತ್ತವೆ. ದವಡೆ ಹಲ್ಲುಗಳು ಮುಪ್ಪಟೆಯಾಗಿದ್ದು, ಘನಾಕೃತಿಯಲ್ಲಿರುವುದು ಇವುಗಳ  ವಿಶೇಷ ಲಕ್ಷಣ. ದವಡೆ ಹಲ್ಲುಗಳೂ ನಿರಂತರವಾಗಿ ಬೆಳೆಯುತ್ತಿರುತ್ತವೆ.

ನೀರಿಲಿಗಳು ಸಾಮಾನ್ಯ ಇಲಿಗಳಿಗಿಂತ ಭಿನ್ನ. ದಷ್ಟಪುಷ್ಟವಾಗಿ ಕಾಣುತ್ತವೆ.  ಮೂತಿ ಮೊಂಡು; ಕಣ್ಣುಗಳು ಹಾಗೂ ಕಿವಿಗಳು ಚಿಕ್ಕವು. ಕಾಲು ಮತ್ತು ಬಾಲ ಮೋಟು. ನೀರಿಲಿಯ ಆಯಸ್ಸು ಒಂದು ವರ್ಷ. ವರ್ಷಕ್ಕೆ ಕಡೆ ಪಕ್ಷ ಎರಡು ಸಲ ಮರಿ ಹಾಕುತ್ತದೆ. ಒಂದು ಸಲಕ್ಕೆ 5-6 ಮರಿಗಳು ಹುಟ್ಟುವುವು.
(ಬಿ.ಕೆ.ಜೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ